ಪ್ರಸ್ತುತ 2024ರ ಲೋಕಸಭಾ ಚುನಾವಣೆಯು ರಂಗೇರಿದ್ದು ಮುಖ್ಯ ವಿಪಕ್ಷೀಯ ಪಕ್ಷವೊಂದು ಅಧಿಕಾರಕ್ಕೆ ಬಂದರೆ ರಾಷ್ಟ್ರದಲ್ಲಿ ಜಾತಿ ಸಮೀಕ್ಷೆ ನಡೆಸುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಈಗಾಗಲೇ ಘೋಷಿಸಿದೆ. ಜಾತಿ ಸಮೀಕ್ಷೆ ಎಂದರೇನು? ಇದೊಂದು ಜಾತಿ ಆಧಾರಿತ ಸರ್ವೆ ಅಂದ್ರೆ ತಪ್ಪಾಗಲ್ಲ, ಯಾವ ಜಾತಿಯಲ್ಲಿ ಎಷ್ಟು ಜನಸಂಖ್ಯೆ ಇದಾರೆ ಎಂಬ ವಿಸ್ತಾರದ ರಿಪೋರ್ಟ್ ಈ ಜಾತಿ ಸಮೀಕ್ಷೆ.
21ನೇ ಶತಮಾನದಲ್ಲಿ ಇರುವ ನಾವು ಇನ್ನೂ ಜಾತಿ ಅನ್ನೋ ಅಂಶಕ್ಕೆ ಮಹತ್ವವನ್ನು ಕೊಡಬೇಕಾ ಅನ್ನೋದು ಯಕ್ಷಪ್ರಶ್ನೆಯಾಗಿ ಉಳಿದಿದೆ, ಮನುಷ್ಯ ತನ್ನ ಅನುಕೂಲಕ್ಕಾಗಿ, ತನ್ನ ನಂಬಿಕೆಗಳಿಗಾಗಿ, ತನ್ನ ಅಸ್ತಿತ್ವಕ್ಕಾಗಿ ಜಾತಿಯಂಬ ಪದ್ಧತಿಯನ್ನು ಹುಟ್ಟು ಹಾಕಿರಬಹುದು. ಕ್ರಮೇಣ ಅದು ನಮ್ಮ ಸಮಾಜದ ಒಂದು ಮೂಲಭೂತ ವಿಷಯವಾಗಿ ಜನರನ್ನು, ಜನರಿಂದ ಬೇರ್ಪಡಿಸುವ ತಂತ್ರವಾಗಿ ಹೊರಹೊಮ್ಮಿತ್ತು. ರಾಜಕೀಯ, ಶತಮಾನಗಳಿಂದ ಜಾತಿಯಂಬ ವಿಷಯವನ್ನು ಇಟ್ಕೊಂಡು ಸಮಾಜದಲ್ಲಿ ಹೊಸ ಬಿರುಕನ್ನು ಸೃಷ್ಟಿ ಮಾಡುತ್ತಲೇ ಬಂದಿತ್ತು. ಸಾಮಾನ್ಯ ಮನುಷ್ಯನಿಗೆ ಜಾತಿ ಅನ್ನೋದು ತನ್ನ ಅಸ್ತಿತ್ವದ ಪ್ರಶ್ನೆ; ರಾಜಕೀಯದಲ್ಲಿ ಜಾತಿ ಮತಗಳ ಎಣಿಕೆಯ ಪ್ರಶ್ನೆ.
ಈ ಜಾತಿ ಸಮೀಕ್ಷೆಯಿಂದ ಏನ್ ಲಾಭ ಆಗಬಹುದು ಅನ್ನೋ ಪ್ರಶ್ನೆಗೆ ಉತ್ತರವನ್ನು ಹುಡುಕಿದರೆ ನಮಗೆ ಸಿಗುವುದು ಅದರೊಳಗಿನ ತಂತ್ರ ಹಾಗೂ ಕುತಂತ್ರ. ಸಮೀಕ್ಷೆ ಮಾಡಿದ ನಂತರ ಇಂತಿಂಥ ಜಾತಿಯಲ್ಲಿ ಎಷ್ಟೆಷ್ಟು ಜನ ಇದಾರೆ ಅದರ ಪ್ರಕಾರ ನಾವು ಅವರಿಗೆ ಸರ್ಕಾರದ ಸವಲತ್ತನ್ನು, ಕಾಯ್ದೆಗಳನ್ನು, ರಿಸರ್ವೇಶನ್ ಗಳನ್ನು ಅಳವಡಿಸಬೇಕು, ಜೊತೆಗೆ ಜಾತಿಗಳಲ್ಲಿ ಇರುವ ಜನಸಂಖ್ಯೆ ಪ್ರಕಾರ ಸರ್ಕಾರದ ಯೋಜನೆಗಳನ್ನು ನಿರ್ಧಾರಪಡಿಸುವ ಒಂದು ಅಸ್ತ್ರವೇ ಈ ಜಾತಿ ಸಮೀಕ್ಷೆ. ಈಗಾಗಲೇ ಅಲ್ಪಸಂಖ್ಯಾತರು, ಬಹುಮತರು ಹೀಗೆ ಅನೇಕ ಜಾತಿ ಪ್ರಕಾರ ವರ್ಗಗಳಿದ್ದು ಚುನಾವಣೆಯಲ್ಲಿ ಜಾತಿ ಅಮ್ಮ ಜಾತಿಯೆಂಬ ಅಂಶ ಮೊದಲೇ ಸ್ಥಾನದಲ್ಲಿ ಇದೆ. ನಾವು ನೋಡಿರಬಹುದು, ಯಾವುದೇ ಪಕ್ಷವಾಗಲಿ, ಯಾವುದೇ ಚುನಾವಣೆ ಆಗಿರ್ಲಿ, ಅಭ್ಯರ್ಥಿಗಳನ್ನು ಆರಿಸುವ ಮೂಲ ಫ್ಯಾಕ್ಟರ್ ಇಂದಿಗೆ ಜಾತಿ.
ಜಾತಿ ಬೆಂಬಲ ಇದ್ದರೆ ರಾಜಕೀಯದಲ್ಲಿ ಏನು ಬೇಕಾದರೂ ಸಾಧಿಸಬಹುದು ಅನ್ನೋ ಸತ್ಯ ಬಹುತೇಕ ಎಲ್ಲರಿಗೂ ತಿಳಿದಿರುವಂಥದ್ದು ಆದರೂ ಇಂತಹ ಕಾಲಮಾನದಲ್ಲಿ ಪ್ರೋಗ್ರೆಸ್ಸಿವ್ ರಾಜಕೀಯನ ಮಾಡೋದು ಬಿಟ್ಟು ಜನರನ್ನು ಇನ್ನೂ ಜಾತಿ ಆಧಾರದ ಮೇಲೆ ವಿಂಗಡಿಸಿ ಒಬ್ಬರ ಮೇಲೆ ಇನ್ನೊಬ್ಬರಿಗೆ ಅಸೂಯೆ ದ್ವೇಷ ಹುಟ್ಟಿಸುವ ತಂತ್ರಗಾರಿಕೆ ಬೇಕಾ? ಯಾವುದೇ ರಾಜ್ಯ ರಾಜಕೀಯ ಪಕ್ಷವಾಗಲಿ, ಅಧಿಕಾರದಲ್ಲಿ ಇರುವಾಗ ತಾನು ಮಾಡಿರೋ ಕೆಲಸದ ಮೇಲೆ ಮತಯಾಚನೆ ಮಾಡೋದು ಸರಿ ಅಷ್ಟೇ.
ಕರ್ನಾಟಕದಲ್ಲೂ ಇಂತಹ ಒಂದು ಜಾತಿ ಸಮೀಕ್ಷೆ ಈಗಾಗಲೇ ನಡೆದಿದೆ ಕೂಡ, ಆದರೆ ಎಲ್ಲಿ ಜಾತಿಯ ಮುಖಂಡರು ತಮ್ಮ ವಿರುದ್ಧ ಉರಿದು ಬೀಳುತ್ತಾರೋ ಅನ್ನೋ ಆತಂಕದಲ್ಲಿ ಸಮೀಕ್ಷೆ ಇನ್ನು ಹೊರಬಿದ್ದಿಲ್ಲ, ಬಹುಶಃ ಬೀಳೋದು ಇಲ್ಲ.
ಮತ ಹಾಕೋ ನಾವು ಇನ್ನೆಷ್ಟು ದಿನಕಾಲ ಈ ಜಾತಿಯ ಬಲೆಗೆ ಬೀಳಬೇಕು?
ನಮ್ಮ ಜಾತಿಯವರು ನಮಗೆ ಒಳಿತು ಮಾಡುತ್ತಾರೆ ಅನ್ನು ನಂಬಿಕೆ ನಮ್ಮಲ್ಲಿ ಸರಿಯೇ?
ನಮಗೆ ಇರೋ ಜಾತಿ ಅಭಿಮಾನವೇ ಈ ಜಾತಿ ಸಮೀಕ್ಷೆಗೆ ಒಂದು ಕಾರಣವೇ?
ಅಥವಾ ನಮ್ಮ ಜಾತಿಯವರು ಚುನಾಯಿತರಾದರೆ ನಮ್ಮ ಜಾತಿಗೆ ಒಳ್ಳೇದ್ ಮಾಡೋದು ಅನ್ನೋ ನಂಬಿಕೆ ಸರಿಯೇ?
ಹೀಗೆ ಹಲವಾರು ಪ್ರಶ್ನೆಗಳು ಕಾಡುತ್ತದೆ ಆದರೆ ಉತ್ತರ ಮಾತ್ರ ಸಿಕ್ಕಿಲ್ಲ, ಬಹುಶಃ ಉತ್ತರ ಸಿಕ್ಕಿದ ದಿನ ಜಾತಿಯನ್ನು ಆಧರಿಸಿ ರಾಜಕೀಯ ಮಾಡೋ ಪಕ್ಷಗಳಿಗೆ ನಮ್ಮ ಸಮಾಜದಲ್ಲಿ ಉಳಿಗಾಲ ಇಲ್ಲ ಅನ್ನೋದೇನೋ ಖಚಿತ.
– ಅಭಿಷೇಕ್